Friday night, I was reminded of this article which I wrote for web portal in 2015...
ಕಾಣದ ಕಡಲಿಗೆ...
ಕಾಣದ ಕಡಲಿಗೆ...
- ವಿದ್ಯಾಶಂಕರ್ ಹರಪನಹಳ್ಳಿ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲನೇ ಒಂದು ದಿನ, ಕಡಲನು
ಕೂಡಬಲ್ಲನೇ ಒಂದು ದಿನ...?
ಜಿ.ಎಸ್.ಎಸ್.ರ ಕವಿತೆ, ಸಿ ಅಶ್ವತ್'ರ ಧ್ವನಿಯಲ್ಲಿ ಆರ್ದ್ರವಾಗಿ ತೇಲಿಬರುತ್ತಿತ್ತು. ಅದು ಅವಿನಾಶನ ಪರ್ಸನಲ್ ಮೊಬೈಲ್ ರಿಂಗ್ಟೋನ್. ಬೆಳಗ್ಗೆ ಆರುಮೂವತ್ತರ ಸಮಯ. ರಿಂಗ್ಟೋನ್ ಮೂರನೇ ಸಲ ಪುನಾರವರ್ತಿಸಿದಾಗ ಅವಿನಾಶ್ ಕೊಂಚ ಗಾಬರಿಯಲ್ಲಿ ಕಣ್ಣುಬಿಟ್ಟ. ಆಫೀಸ್ ಮೊಬೈಲ್ ಮತ್ತು ಪರ್ಸನಲ್ ಮೊಬೈಲ್'ನ್ನು ತಲೆದಸೆಯಲ್ಲಿ ಅಥವಾ ಮಂಚದ ಹತ್ತಿರದ ಸೈಡ್ ಟೇಬಲ್ ಮೇಲೆ ಇಟ್ಟುಕೊಂಡು ಮಲಗುವುದು ಅವನ ಅಭ್ಯಾಸ. ವಾರಾಂತ್ಯದಲ್ಲಿ ಆಫೀಸ್ ಕೆಲಸವೇನೂ ಇರದಿದ್ದರೆ, ಆಫೀಸ್ ಮೊಬೈಲ್ ಸ್ವಿಚ್ ಆಫ್ ಮಾಡಿಬಿಡುತ್ತಿದ್ದ.
ಹಿಂದಿನ ರಾತ್ರಿ ಎರಡು ಗಂಟೆಯವರೆಗು ನ್ಯೂಜೆರ್ಸಿಯ ಕ್ಲೈಂಟ್ ಜೊತೆ ಕಾನ್ಫರೆನ್ಸ್ ಕಾಲ್ ಇತ್ತು. ಕಾಲ್ ಮುಗಿಸಿ ಕೊಂಚ ಲೇಟಾಗಿ ಎದ್ದೇಳುವ ಎಂದು ಪ್ಲಾನ್ ಮಾಡಿಕೊಂಡು ಮಲಗಿದ್ದ. ಆಫೀಸಿಗೆ ಹನ್ನೊಂದು, ಹನ್ನೆರಡಕ್ಕೊ ಹೋಗುವ ಪ್ಲಾನ್ ಹಾಕಿದ್ದ.
ಇವನ ಕೆಲಸ ವೈಖರಿಯನ್ನು ಹತ್ತು ವರ್ಷದಿಂದ ನೋಡಿಬಲ್ಲ ಹೆಂಡತಿ ಕೀರ್ತನ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಅಡಿಗೆ ತಯ್ಯಾರಿಯ ಗಡಿಬಿಡಿಯಲ್ಲಿದ್ದಳು. ಇನರ್ಧ ಗಂಟೆಯಲ್ಲಿ ಮಗನನ್ನು ಎದ್ದೇಳಿಸಿ ಶಾಲೆಗೇ ತಯ್ಯಾರಿ ಮಾಡಿ ಕಳುಹಿಸಬೇಕಿತ್ತು. ಅವಳಿಗೂ ಅವಿನಾಶನ ಮೊಬೈಲ್ ಹಾಡಿದ್ದು ಕೇಳಿಸಿತ್ತು, ಆದರೆ ಅವಳು ಮೊಬೈಲ್ ಎತ್ತಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಮದುವೆಯಾದ ಹೊಸದರಲ್ಲಿ ಒಮ್ಮೆ ಅವಿನಾಶನ ಕಾಲ್ ರೀಸಿವ್ ಮಾಡಿದ್ದಕ್ಕೆ, ಪರ್ಸನಲ್ ಸ್ಪೇಸ್, ಪ್ರೈವಸಿ ಬಗ್ಗೆ ತಣ್ಣಗೆ ಒಂದು ಗಂಟೆ ಭಾಷಣ ಮಾಡಿದ್ದ. ಅಂದಿನಿಂದ ಅವನು ಹೇಳದ ಹೊರತು ಕೀರ್ತನ ಅವನ ಮೊಬೈಲ್ ಮುಟ್ಟುತ್ತಿರಲಿಲ್ಲ.
ಪರ್ಸನಲ್ ಮೊಬೈಲ್'ನ ಮೂರನೇ ರಿಂಗ್ ಟೋನ್'ಗೆ ಕಣ್ಣುಬಿಟ್ಟ ಅವಿನಾಶನಿಗೆ ಒಂದು ಕ್ಷಣ ಏನೂ ಹೊಳೆಯದೇ ಸ್ತಬ್ಧನಾಗಿದ್ದ. ನಂತರ ಅವನ ಮೆದುಳು, ಇಂಜಿನಿಯರಿಂಗ್ ಓದಿದ ಮೆದುಳು ಕೆಲಸ ಮಾಡಲು ಶುರುಮಾಡಿತು. ಸಧ್ಯ ಆಫೀಸ್ ಮೊಬೈಲ್ ಅಲ್ಲ ಹೊಡೆದು ಕೊಂಡಿದ್ದು ಎಂದು ಅರಿವಿಗೆ ಬಂತು. ಈ ಹೊತ್ತಲ್ಲಿ ಪರ್ಸನಲ್ ಮೊಬೈಲ್'ಗೆ ಮಾಡಿದವರ್ಯಾರು? ಎಂದು ಕಂಪ್ಯೂಟರ್ ವೇಗದಲ್ಲಿ ಯೋಚಿಸುತ್ತಾ, ಬಲಕ್ಕೆ ಹೊರಳಿ ಮೊಬೈಲ್ ಎತ್ತಿಕೊಂಡ. ಅಪ್ಪ? ಅಮ್ಮ? ಒಂದು ಕ್ಷಣ ಚಿಂತಿಸಿದ... ಅಷ್ಟ್ಹೋತ್ತಿಗೆ ಸಿ. ಅಶ್ವತ್ರು ನಾಲ್ಕನೇ ಬಾರಿಗೆ ಒದೆ ಆರ್ದ್ರತೆಯಿಂದ ಹಾಡಲು ಶುರುವಿಟ್ಟುಕೊಂಡರು "ಕಾಣದ ಕಡಲಿಗೆ..."
ಸ್ಮಾರ್ಟ್ ಫೋನ್ ಮೇಲಿನ ಫ್ಲಾಪ್ ತೆಗೆದು ನೋಡಿದ. ಸ್ನೇಹಿತನ ಹೆಸರು ಡಿಸ್ಪ್ಲೇ ಮೇಲೆ ತೋರುತ್ತಿತ್ತು ' ಸುರೇಶ್ ಫ್ರೆಂಡ್ ಹೈ ಟೆಕ್ ಸಲೂಷನ್ಸ್' ಮೊಬೈಲ್'ನಲ್ಲಿ ಹೆಸರು ಸೇವ್ ಮಾಡುವಾಗ ಹೆಸರು, ಸಂಬಂಧ ಮತ್ತು ಅವರು ಕೆಲಸ ಮಾಡುವ ಕಂಪನಿ ಹೆಸರು ಸೇರಿಸಿ ಸೇವ್ ಮಾಡುವುದು ಅವಿನಾಶ ರೂಢಿಸಿಕೊಂಡಿರುವ ಅಭ್ಯಾಸ. ಬೆಂಗಳೂರು ಇಂತಹ ಸಣ್ಣಪುಟ್ಟ ಜಾಣತನ ಹೇಳಿಕೊಡುತ್ತದೆ, ಕಲಿತವರು ಮುಂದುವರೆಯುತ್ತಾರೆ, ಕಲಿಯದವರು ಬಂದ ದಾರಿಗೆ ಸುಂಕವಿಲ್ಲವೆಂದು ತಮ್ಮೂರಿಗೆ ಮರಳುತ್ತಾರೆ.
ಸಿ. ಅಶ್ವತ್'ರಿಗೆ ಹೆಚ್ಚು ತೊಂದರೆ ಕೊಡದೆ, ಮೊಬೈಲ್ ಫೋನ್ ರಿಸೀವ್ ಮಾಡಿ "ಹಲ್ಲೋ ಸುರೇಶ್... ಗುಡ್ ಮಾರ್ನಿಂಗ್! ಏನ್ ಸಮಾಚಾರ?" ಎಂದ. ಧ್ವನಿ ನಿದ್ದೆ ಕಡಿಮೆ ಮಾಡಿದ್ದರ ಫಲ, ಬೆಳಗಿನ ಚಳಿಗೆ ಕೊಂಚ ಗೊಗ್ಗರ ಗೊಗ್ಗರವಾಗಿರುವಂತೆ ಭಾಸವಾಯಿತು. ಸಣ್ಣಗೆ ಕೆಮ್ಮಿ ಧ್ವನಿ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ.
ಅತ್ತ ಕಡೆಯಿಂದ ಸುರೇಶ "ಅವ್ವಿ ಸ್ಸಾರಿ ಕಣೋ... ಬೆಳಬೆಳಗ್ಗೆ ಡಿಸ್ಟರ್ಬ್ ಮಾಡಿದೆ... ನಮ್ಮ ಫ್ರೆಂಡ್ ಸುಂದರೇಶ್... ಅದೇ ಸುಂದರ್ ಹೋಗಿಬಿಟ್ಟ ಕಣೋ... ನನಗೆ ಈಗ ತಾನೇ ಸುಧೀ ಫೋನ್ ಮಾಡಿದ್ದ..." ಎಂದವನ ಧ್ವನಿ ಭಾರವಾಗಿತ್ತು. ಸಾವಿನ ಸುದ್ಧಿ ಅರಗಿಸಿಕೊಂಡಿಲ್ಲ ಎಂಬುದು ಅವನ ಧ್ವನಿಯಲ್ಲಿನ ಗಲಿಬಿಲಿ ತೋರುತ್ತಿತ್ತು. ಅವನಿಗೆ ಅರ್ಜೆಂಟಾಗಿ ಯಾರಿಗಾದರು ಹೇಳಿ ತನ್ನ ಪ್ಯಾನಿಕ್ ಕಡಿಮೆ ಮಾಡಿಕೊಳ್ಳಬೇಕಿತ್ತು. ಆಗಲೇ ಮೂರು ಜನ ಫ್ರೆಂಡ್ಸ್'ಗೆ ಫೋನ್ ಮಾಡಿ ಹೇಳಿದ್ದ. ಒಬ್ಬಬ್ಬರಿಗೆ ಫೋನ್ ಮಾಡಿ ಹೇಳಿದಾಗಲೂ ಅವನ ನಿರೀಕ್ಷೆ ಮೀರಿ ಪಾನಿಕ್ ಹೆಚ್ಚಾಗುತ್ತಿತ್ತು. ಏನು ತೋಚದೆ ಮತ್ತಷ್ಟು ಗಾಬರಿಯಾಗಿ ಅವಿನಾಶನಿಗೆ ಫೋನ್ ಮಾಡಿದ್ದ.
ಇತ್ತ ಅವಿನಾಶನಿಗೆ ಅವನಿಗೆ ತಾನು ಕೇಳಿದ್ದು ನಿಜವಲ್ಲವೇನೋ ಎಂಬ ಸಣ್ಣ ಅನುಮಾನ ಮೂಡಿ "ಸ್ಸಾರಿ... ಕಮ್ ಅಗೈನ್..." ಎಂದ. ಸುರೇಶ್ ಮತ್ತೆ ಅದೇ ವಿಷಯ ಹೇಳಿದ. "ಅಯ್ಯೋ ನಮ್ಮ ವಯಸ್ಸಿನವನೇ ಅಲ್ಲವೇನೋ..." ಎಂದ. ಸುರೇಶ ಸುಮ್ಮನೆ ಹೂಂಗುಟ್ಟಿದ.
ಅವಿನಾಶನಿಗೆ ಮುಂದೆ ಏನು ತೋಚದೆ "ಸುರೇಶಾ... ಇಗ್ತಾನೆ ಎದ್ದೆ ಕಣೋ... ನಿನ್ನೆ ಎರಡು ಗಂಟೆಯವರೆಗೂ ಕಾನ್ಫರೆನ್ಸ್ ಕಾಲ್ ಇತ್ತು... ಕೊಂಚ ಹೊತ್ತು ಬಿಟ್ಟು ನಾನೇ ಫೋನ್ ಮಾಡ್ತೀನಿ ಇರು... ಕೊಂಚ ಫ್ರೆಶ್ ಆಗಬೇಕು" ಎಂದ. ಸುರೇಶ ಕೊಂಚ ನಿರಾಸೆಯಲ್ಲಿ ಹೂಂ ಎಂದ. ಕೊಂಚ ಹೊತ್ತು ಮಾತಾಡಿದ್ದರೆ ತನ್ನ ಗಾಬರಿ, ಪ್ಯಾನಿಕ್ ಭಾವ ಕಡಿಮೆಯಾಗುತ್ತಿತ್ತು ಎಂಬ ಆಸೆಯಿತ್ತು ಅವನಿಗೆ. ಮತ್ತೇ ಯಾರಿಗೆ ಫೋನ್ ಮಾಡಲಿ ಎಂದು ಯೋಚಿಸತೊಡಗಿದ.
ಇತ್ತ ಅವಿನಾಶ ಹಾಸಿಗೆಯಿಂದ ಎದ್ದು ವಿಂಡೋ ಕರ್ಟನ್ ಸರಿಸಿದ. ಆಗಲೇ ಸೂರ್ಯ ಉದಯಸಿದ್ದ. ಎಲ್ಲೆಡೆ ಮುಂಜಾನೆಯ ಹೊಂಬಿಸಿಲು ಹರಡಿತ್ತು. ಆಗತಾನೆ ಕೇಳಿದ ಸಾವಿನ ಸುದ್ದಿ, ಬಂಗಾರ ವರ್ಣದ ಬಿಸಿಲು ನೋಡಿ ಅವಿನಾಶನಿಗೆ 'ಮೆಕೆನಸ್ ಗೋಲ್ಡ್; ಸಿನಿಮಾದ ದುರಂತ ಅಂತ್ಯದ ಸೀನ್ ಅಪ್ರಯತ್ನಕವಾಗಿ ನೆನಪಾಯಿತು. ಕಣ್ಣು ಜುಮು ಜುಮು ಎಂದು ಉರಿಯುತ್ತಿತ್ತು. ಹಾಗೆ ಎದ್ದು ಬಾತ್ ರೂಂ ಕಡೆ ಹೊರಟಾಗ ತಲೆ ಸುತ್ತಿ ಬಂದಂತಾಗಿ ಕೊಂಚ ಗಾಬರಿಯಾದ.
ಬಾತ್ ರೂಂ ಸಿಂಕಲ್ಲಿ ತಣ್ಣನೆ ನೀರಲ್ಲಿ ಚೆನ್ನಾಗಿ ಮುಖ ತೊಳೆದ. ನಿದ್ದೆಗೆಟ್ಟಿದ್ದರಿಂದ ಮೈ ಕೊಂಚ ಬಿಸಿಯಾಗಿತ್ತು. ತಣ್ಣೆನೆ ನೀರು ಹಿತವಾಗಿತ್ತು. ಬಾತ್ ರೂಂನಿಂದ ಹೊರ ಬಂದವನೇ "ಕೀರ್ತನಾ... ಕಾಫಿ ಬೇಕು..." ಎಂದು ಕೊಂಚ ಗಟ್ಟಿಯಾಗಿ ಕೂಗಿದ. ಅಡಿಗೆ ಮನೆಯಲ್ಲಿ ಅದೇ ಸಮಯಕ್ಕೆ ಕುಕ್ಕರ್ ಕೂಗುತ್ತಿತ್ತು.
~*~
ಬೆಳಗಿನ ಅಡಿಗೆ ಗಡಿಬಿಡಿಯಲ್ಲಿದ್ದ ಕೀರ್ತನಳಿಗೆ ಅವಿನಾಶ್ ಇಷ್ಟು ಬೇಗ ಎದ್ದಿದ್ದು ಕೊಂಚ ಅಚ್ಚರಿಯಾಗಿತ್ತು. ಅವಿನಾಶ್ ಎರಡು ಗಂಟೆಯವರೆಗೂ ಕಾನ್ಫರೆನ್ಸ್ ಕಾಲ್ನಲ್ಲಿ ಇದ್ದಿದ್ದು, ತಡವಾಗಿ ಬಂದು ಪಕ್ಕ ಮಲಗಿದ್ದನ್ನು ಅವಳು ನಿದ್ದೆಗಣ್ಣಲ್ಲಿ ಗಮನಿಸಿದ್ದಳು. ಅದರೂ ಅವಿನಾಶ್ ಬೆಳಗಿನ ಫೋನ್ ನಂತರ ಮತ್ತೆ ಮಲಗದೇ ಎದ್ದಿದ್ದು ಅವಳಿಗೆ ಆಶರ್ಯವಾಗಿತ್ತು.
ಈ ಕುಕ್ಕರ್ ಕೂಗಿನ ನಡುವೆ ಅವಳಿಗೆ ಕೇಳಿಸಿತೋ ಇಲ್ಲವೋ ಎಂದುಕೊಂಡು, ಕಾಫಿ ಕೇಳಲು ಅವಿನಾಶ್ ಅಡಿಗೆ ಮನೆಗೆ ಬಂದ. ಅವನು ಕೇಳುವ ಮುನ್ನವೇ "ಒಂದು ನಿಮಿಷ ಕಾಫಿ ಕೊಟ್ಟೆ..." ಎಂದಳು ಗಡಿಬಿಡಿಯಲ್ಲಿ. ಏನು ವಿಷಯ ಎಂಬಂತೆ ಅವನ ಕಡೆ ನೋಡಿದಳು. ಇಲ್ಲ ನಿನಗೆ ಸಂಬಂಧಿಸಿದ ವಿಷಯವಲ್ಲ ಎಂಬಂತೆ ಅವಳ ಕಡೆ ನೋಡಿದ. ಅವನೇ ಹೇಳಲಿ ಎಂದುಕೊಂಡು ಅವಳು ಕೂಡ ಸುಮ್ಮನಾದಳು, ಮತ್ತೆ ಕೇಳಿದರೆ ಭಾಷಣ ಕೇಳುವ ಭಯ, ನಿರುತ್ಸಾಹ ಅವಳಿಗೆ.
ಹಾಲಿನಲ್ಲಿ ಸುಮ್ಮನೆ ಪೇಪರ್ ಮೇಲೆ ಕಣ್ಣಾಡಿಸುತ್ತಾ ಕೂತವನಿಗೆ ಕೀರ್ತನಾ ಕಾಫಿ ತಂದು ಕೊಟ್ಟಳು. ಬಿಸಿ ಬಿಸಿ ಕಾಫಿ ಒಳ ಹೋಗುತ್ತಿದ್ದಂತೆ ಮನಸು ಕೊಂಚ ತಿಳಿಯಾಗ ತೊಡಗಿತು. "ನನ್ನ ವಯಸ್ಸಿನವನಾದ ಸುಂದರೇಶ್ ಹೋಗಿಬಿಟ್ಟನೆ? ಎಂಬುದು ಮಾತ್ರ ಅರಗಿಸಿಕೊಳ್ಳಲಾಗದೆ ಅವಿನಾಶ ಹಾಲಿನಲ್ಲಿ ಕೂತಿದ್ದ.
ಮತ್ತೆ ಸುರೇಶನಿಗೆ ಫೋನ್ ಮಾಡುವ ಹುಕಿ ಬರಲಿಲ್ಲ. ಸುಂದರೇಶನ ಜೊತೆ ಮಾತಾಡಿದ ಮಾತುಗಳು, ಹಾಕಿದ ಪ್ಲಾನ್ಗಳು, ಕುಡಿದ ಸಂಜೆಗಳು, ಪಾರ್ಟಿಗಳು ಎಲ್ಲಾ ಬೇಡವೆಂದರೂ ನೆನಪಾಗತೊಡಗಿತು. ಅಂತಹ ಅನಾರೋಗ್ಯವು ಏನಿರಲಿಲ್ಲ. ತನ್ನಷ್ಟೇ ಅರೋಗ್ಯಶಾಲಿಯಾಗಿದ್ದ. ಸಾವು ಅವನ ಸೆಳೆದಂತೆ ನನ್ನನೂ...? ಯಾವಾಗ ಏನೋ? ಯಾಕೋ ಎಲ್ಲಾ ನಿರಾರ್ಥಕ ಎನಿಸಿ ವಿಷಣ್ಣ ಭಾವದಲ್ಲಿ ಸುಮ್ಮನೆ ಕೂತೆ ಇದ್ದ.